ಕೊಡತಿಕೀಟ

ಓಡೊನೇಟ ಗಣ, ಅನೈಸಾಪ್ಟರ ಉಪಗಣದ 8 ಕುಟುಂಬಗಳಿಗೆ ಸೇರಿದ ಹಲವಾರು ಜಾತಿಯ ಕೀಟಗಳಿಗಿರುವ ಸಾಮಾನ್ಯ ಹೆಸರು (ಡ್ರೇಗನ್ ಫ್ಲೈ). ಉಷ್ಣವಲಯ ಪ್ರದೇಶಗಳಲ್ಲೆಲ್ಲ ಇವುಗಳ ವ್ಯಾಪ್ತಿ ಇದೆ. ಹಳ್ಳ, ನದಿ, ಕೆರೆ, ಕೊಳ ಮುಂತಾದವುಗಳ ಬಳಿ ಇವು ವೇಗವಾಗಿ ಚುರುಕಾಗಿ ಹಾರಾಡುತ್ತಿರುವುದನ್ನು ನೋಡಬಹುದು. ಕನ್ಯಾಕೀಟದಂತೆಯೇ ಹಿಂಸ್ರಕೀಟವಾದ ಕೊಡತಿಕೀಟವೂ ಸೊಳ್ಳೆ, ಚಶಕ, ಕುದುರೆನೊಣ ಮುಂತಾದ ಇತರ ಕೀಟಗಳನ್ನು ಭಕ್ಷಿಸಿ ಜೀವಿಸುತ್ತದೆ. ಇದು ಹಾರುತ್ತಿರುವಾಗಲೇ ಆಹಾರಕ್ಕಾಗಿ ಜೀವಿಯನ್ನು ಹಿಡಿಯಬಲ್ಲದು. ಕೊಡತಿಕೀಟ ದೇಹ ರಚನೆಯಲ್ಲೂ ಜೀವನಕ್ರಮದಲ್ಲೂ ಕನ್ಯಾಕೀಟವನ್ನು ಹೋಲುತ್ತದೆಯಾದರೂ ಇವೆರಡಕ್ಕೂ ಕೆಲವು ಲಕ್ಷಣಗಳಲ್ಲಿ ಭಿನ್ನತೆಯಿದೆ. ಇದು ಕನ್ಯಾಕೀಟಕ್ಕಿಂತ ಗಾತ್ರದಲ್ಲಿ ದೊಡ್ಡದು. ಹಾಗೂ ದಷ್ಟಪುಷ್ಟವಾದುದು. (ದಕ್ಷಿಣ ಅಮೆರಿಕದ ಮೆಗಲೊಪ್ರೆಪಸ್ ಸೀರುಲೆಟಸ್ ಎಂಬುದು 7ಳಿ " ಅಗಲವಿದೆ). ಸಾಮಾನ್ಯವಾಗಿ ಕೊಡತಿಕೀಟಗಳಲ್ಲಿ ಗಂಡು ಹೆಣ್ಣುಗಳೆರಡೂ ವರ್ಣರಂಜಿತವಾಗಿರುತ್ತವೆ. ದೇಹದ ಬಣ್ಣ ಹಸಿರು, ಕೆಂಪು, ಹಳದಿ, ನೀಲಿ, ಕಂದು ಮುಂತಾಗಿದ್ದು ಮನಮೋಹಕವಾಗಿರುತ್ತದೆ. ಬಿಸಿಲಿನಲ್ಲಿ ಹಾರಾಡುತ್ತಿರುವಾಗಲಂತೂ ಇವು ಅತ್ಯಂತ ಸುಂದರವಾಗಿ ಕಾಣುತ್ತವೆ. ಕನ್ಯಾಕೀಟಗಳಲ್ಲಿ ಕಣ್ಣುಗಳು ತಲೆಯಿಂದ ಸ್ವಲ್ಪ ಹೊರಚಾಚಿಕೊಂಡಿರುತ್ತವೆ. ಆದರೆ ಕೊಡತಿಕೀಟಗಳಲ್ಲಿ ಹೀಗಿಲ್ಲ. ಕನ್ಯಾಕೀಟಗಳು ಕುಳಿತಾಗ ರೆಕ್ಕೆಗಳು ದೇಹದ ಹಿಂಭಾಗಕ್ಕೆ ಮಡಿಚಿಕೊಂಡಿದ್ದರೆ ಕೊಡತಿಕೀಟಗಳಲ್ಲಿ ರೆಕ್ಕೆಗಳು ಅಗಲವಾಗಿ ಹರಡಿಕೊಂಡಿರುತ್ತವೆ. ಅಲ್ಲದೆ ಕೊಡತಿಕೀಟಗಳ ಹಿಂದಿನ ಜೊತೆ ರೆಕ್ಕೆಗಳು ಮುಂದಿನ ಜೊತೆಗಿಂತ ಅಗಲವಾಗಿವೆ. (ಕನ್ಯಾಕೀಟಗಳಲ್ಲಿ ಎರಡು ಜೊತೆಗಳೂ ಸಮಗಾತ್ರದವು). ಕನ್ಯಾಕೀಟಗಳ ಡಿಂಬಗಳಿಗೆ ಎಲೆಯಾಕಾರದ ಕಿವಿರುಗಳಿವೆ. ಆದರೆ ಕೊಡತಿಕೀಟಗಳ ಡಿಂಬಗಳಲ್ಲಿ ಗುದದ್ವಾರದ ಬಳಿ ಏಣುಗಳ ರೂಪದ ಕೆಲವು ಕಿವಿರುಗಳಿವೆ. ಈ ವ್ಯತ್ಯಾಸಗಳನ್ನು ಬಿಟ್ಟರೆ ಉಳಿದೆಲ್ಲ ಲಕ್ಷಣಗಳಲ್ಲೂ ಸಂಭೋಗಕ್ರಿಯೆಯಲ್ಲೂ ಡಿಂಬಗಳ ಬೆಳವಣಿಗೆಯ ಕ್ರಮದಲ್ಲೂ ಕೊಡತಿಕೀಟ ಕನ್ಯಾಕೀಟವನ್ನು ಹೋಲುತ್ತದೆ (ನೋಡಿ- ಕನ್ಯಾಕೀಟ). ಕೊಡತಿಕೀಟಗಳ ಮುಖ್ಯವಾದ ಪ್ರಭೇದಗಳು ಇವು-ಮ್ಯಾಕ್ರೊಮಿಯ ಮ್ಯಾಗ್ನಿಫಿಕ, ಮೆಗಲೊ ಪ್ರೆಪಸ್, ಸೀರುಲೇಟಸ್, ಗಾಂಫಸ್ ಕ್ವಾಡ್ರಿಕಲರ್, ಅನಾಕ್ಸ್, ಟ್ಯಾಕೊಟೆರಿಕ್ಸ್, ಲೆಸ್ಟಿಸ್, ಲಿಬೆಲ್ಲೂಲ ಪಲ್ಚೆಲ. 	 (ಬಿ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ